30.10.08

ಭೈರಪ್ಪನವರ "ಸಂಶೋಧನೆ"

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.

ಭೈರಪ್ಪನವರ ಅಂಕಿ-ಅಂಶದ ಮೂಲ ಒಂದು ಅನಾಮಿಕ ವೆಬ್‌ಸೈಟ್. ಅನಾಮಿಕವಾಗಿರೋದು ತಪ್ಪೇನಲ್ಲ. ಆದರೆ ಬೇಜವಾಬ್ದಾರಿ ಮಾತುಗಳನ್ನು ಹೇಳುವುದಕ್ಕಾಗಿಯೇ ಅನಾಮಿಕರಾಗಿರೋದು ಅಪಾಯ. ಕ್ರಿಶ್ಚಿಯಾನಿಟಿಯನ್ನು ದೂರುತ್ತಾ ಉಳಿದವರನ್ನು “ಸಂತುಷ್ಟ”ರನ್ನಾಗಿಸುವ ಉತ್ಕಟ ಆಸೆ ಅದರ ಎಲ್ಲ ಹಾಳೆಗಳಲ್ಲಿ ನೀವು ಕಾಣಬಹುದು. ಅಂತಹವು ಎಲ್ಲ ಧರ್ಮಗಳ ವಿರುದ್ಧ ಹಲವು ವೆಬ್‌ಸೈಟುಗಳಿವೆ ಅನ್ನುವುದೂ ನಿಜ.

ವಿಷಯ ಅದಲ್ಲ. ಅಲ್ಲಿಂದ ಅನಾಮತ್ತಾಗಿ ತಮ್ಮ ಅಂಕಿ-ಅಂಶಗಳನ್ನು ಎತ್ತಿಕೊಂಡಿರುವ ಭೈರಪ್ಪನವರು ತಮ್ಮ ಪತ್ರಿಕೆಯ ಲೇಖನದಲ್ಲಿ ಅದರ ಹೆಸರು ಹೇಳಿಲ್ಲ. ಭೈರಪ್ಪನವರಿಗೂ, ಆ ವೆಬ್‌ಸೈಟಿಗೂ ಒಂದು ಕಾಮನ್ ಮೂಲ ಇರಬಹುದು. ವೆಬ್‌ಸೈಟಿನವರೂ ಅದನ್ನು ಹೇಳಿಲ್ಲದೇ ಇರೋದರಿಂದ. ಭೈರಪ್ಪರ ಬರಹಕ್ಕಿಂತ ಮುಂಚೆಯೇ ಆ ವೆಬ್‌ಸೈಟಿರೋದರಿಂದ, ಅಲ್ಲಿಂದ ಎತ್ತಿಕೊಂಡಿದ್ದಾರೆ ಅಂದುಕೊಳ್ಳಲು ಅಡ್ಡಿಯಿಲ್ಲ.

ಕನ್ನಡದ ಹೆಸರಾಂತ, “ಜವಾಬ್ದಾರಿಯುತ(?)”, ಲೇಖಕ ಹೀಗೆ ಮೂಲ ಹೇಳದೆ ತನ್ನದೇ ಸಂಶೋಧನೆ ಎಂಬಂತೆ ಬರಿಯುವುದು ಬರೀ ತಪ್ಪಷ್ಟೇ ಅಲ್ಲ - ಸಂಶೋಧಕರ ಪ್ರಕಾರ “ಘೋರ ಅಪರಾಧ” ಕೂಡ. ತತ್ವಶಾಸ್ತ್ರದ ಕಂಪಾರಿಟಿವ್ ಸ್ಟಡಿ ಎಂಬಂತ ಸಂಶೋಧನೆ ಮಾಡಿರುವ ಭೈರಪ್ಪನವರಿಗೆ ಇದು ತಿಳಿಯದ ಸಂಗತಿಯಲ್ಲ. ತಿಳಿದಿದ್ದೂ ಮಾಡುವುದರ ಹಿಂದಿನ ಉದ್ದೇಶ, ಕುಟಿಲತೆ ಅಪಾಯಕಾರಿ. ಇಂಟರ್ನೆಟ್ ಕೈಗೆಟುಕದ ಎಷ್ಟೋ ಮಂದಿ ಓದುಗರು ಇವರ ಮಾತುಗಳನ್ನು “ಸಾಬೀತಾದ ಮಾತು” ಎಂದು ಪರಿಗಣಿಸುವ ಅಪಾಯವಿದೆ. “ಅಗಾಧ ಸಂಶೋಧನೆಯ ಫಲ” ಅಂದುಕೊಳ್ಳುವ ಅಪಾಯವಿದೆ. ಹೆಸರಾಂತ ಪತ್ರಿಕೆಯ ಬೆಂಬಲ ಇರುವುದರಿಂದ ಜನರ ಮನಸ್ಸನ್ನು ಕೆಡಿಸುವ ಅಪಾಯವಂತೂ ಇದ್ದೇ ಇದೆ.

ಹೀಗೆಲ್ಲಾ ಏಕೆ ಅಂದುಕೊಳ್ಳುತ್ತಿದ್ದೇನೆಂದು ಕೆಳಗಿನ ಎರಡು ಭಾಗಗಳನ್ನು ಗಮನಿಸಿದರೆ ನಿಮಗೇ ಗಟ್ಟಿಯಾಗುತ್ತದೆ. ಇವಲ್ಲದೆ ಆ ಲೇಖನದಲ್ಲಿ ಬೇರೆ ಹಲವು ಮಾಹಿತಿಗಳು ಇವೆ. ಇವನ್ನು ನೋಡಿದ ಮೇಲೆ ಅವುಗಳನ್ನೂ ಅನುಮಾನದಿಂದಲೇ ನೋಡಬೇಕಾಗುತ್ತದೆ. ಎಡಗಡೆ ಭೈರಪ್ಪನವರ ಲೇಖನದ ತುಣುಕುಗಳು, ಎಡಗಡೆ ಆ ಅನಾಮಿಕ ವೆಬ್‌ಸೈಟಿನ ತುಣುಕುಗಳು.



ಕಡೆಗೆ ಇದು “ಪ್ರಾಮಾಣಿಕ” “ಜವಾಬ್ದಾರಿಯುತ” ಭೈರಪ್ಪನವರು ಉಳಿದವರಿಗೆ ಕೊಡುವ ಉಪದೇಶ!

No comments: