8.2.09

ಅಲ್ಲಿ ಮುಂದುವರೆದಿದೆ...

ಹೊಸ ಪೋಸ್ಟುಗಳಿಗೆ ಇಲ್ಲಿಗೆ ತೆರಳಿ
anivaasi.wordpress.com
ನಿಮ್ಮ ಆಸಕ್ತಿಗೆ ಥ್ಯಾಂಕ್ಸ್...

1.2.09

ಅಧರ್ಮೀಯರಾಗುವುದೇ ದಾರಿ


-೧-
ಧರ್ಮ ಅಂದರೆ ಏನು? ಧರ್ಮ ನಮ್ಮ ಬದುಕಿನಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ಸಾಮೂಹಿಕವನ್ನು ಮತ್ತು ವಯ್ಯಕ್ತಿಕವನ್ನು ಅದು ಹೇಗೆ ರೂಪಿಸುತ್ತದೆ? ಈ ಕೆಲವು ಪ್ರಶ್ನೆಗಳು ನಮ್ಮ ಸುತ್ತ ಆಗಾಗ ಏಳುತ್ತವೆ.

ಧರ್ಮ ಅಂದರೆ ದೇವರ ಅಥವಾ ಒಂದು ಅತಿಭೌತಿಕ ಶಕ್ತಿಯಲ್ಲಿ ನಂಬಿಕೆಯನ್ನು ಅನುಮೋದಿಸುವ ವಿಚಾರಧಾರೆ. ಆ ವಿಚಾರಧಾರೆಯನ್ನು ಉಳಿಸಿಕೊಳ್ಳಲು ಅದರ ಸುತ್ತ ಆಚರಣೆ. ಧರ್ಮದ ಆ ದೇವರು ಒಂದೇ ಹೆಸರಲ್ಲಿರಬಹುದು, ಕೋಟ್ಯಾಂತರ ಹೆಸರಲ್ಲಿರಬಹುದು. ಧರ್ಮದ ಈ ನಂಬಿಕೆಯೇ "ಮೂಲ ಬೌದ್ಧ" ಹಾಗು ನಾಸ್ತಿಕತೆಗಳನ್ನು ಧರ್ಮದಿಂದ ಹೊರಗೆ ಉಳಿಸುತ್ತವೆ. ಧರ್ಮಶಾಸ್ತ್ರದವರ ಈ ವಿವರಣೆ ಧರ್ಮದ ಬಗ್ಗೆ ಒಂದು ಮೌಲಿಕ ಆಧಾರದ ವಿವರಣೆ ಅಷ್ಟೆ.

ಹೊಸ ಧರ್ಮಿಷ್ಠರು ಮತ್ತೊಂದು ಅರ್ಥವನ್ನು ಹೇಳುತ್ತಾರೆ : ಅದೊಂದು ಜೀವನ ಶೈಲಿ/ಪದ್ಧತಿ ಅಂತ. ಧರ್ಮದ ನಂಬಿಕಸ್ತರೆಲ್ಲಾ ಒಂದು ಬಗೆಯಲ್ಲಿ ಬದುಕುತ್ತಾರೆ ಹಾಗಾಗಿ ಅದೊಂದು ಜೀವನ ಶೈಲಿ/ಪದ್ಧತಿ ಹೌದಲ್ಲವೆ ಅನಿಸುತ್ತದೆ. ಆದರೆ ತುಸು ಗಮನಿಸಿ ನೋಡಿದರೆ, ಧರ್ಮ ನಮ್ಮ ಯೋಚನೆಗಳನ್ನು ಪ್ರಭಾವಿಸುವುದರಿಂದ - ಅದೊಂದು ಜೀವನ ಶೈಲಿಯಾಗಿ ಕಾಣಿಸಿಕೊಳ್ಳುತ್ತದೆ ಅಷ್ಟೆ. ಜೀವನ ಪದ್ಧತಿ/ಶೈಲಿಗೆ ಬರೇ ಧರ್ಮವಲ್ಲ; ಹಣ, ರಾಜಕೀಯ, ಭೂಗೋಳ, ಪರಿಸರ ಹೀಗೆ ಹಲವು ಅಂಶಗಳೂ ಸ್ಪೂರ್ತಿ/ಒತ್ತಡಗಳಾಗುತ್ತವೆ. ದೇವರಲ್ಲಿ ನಂಬಿಕೆಯನ್ನು ಪ್ರಚೋದಿಸಿ, ಆಚರಣೆಗಳ ಮೂಲಕ ಅದನ್ನು ಪ್ರಚುರಪಡಿಸುವ ಧರ್ಮ ಜೀವನಶೈಲಿಯನ್ನು ರೂಪಿಸುವ ಒಂದು ಅಂಶವಷ್ಟೆ. ಹಾಗಾಗಿ ಒಂದು ಜೀವನ ಪದ್ಧತಿ/ಶೈಲಿಯನ್ನೇ ಧರ್ಮ ಎನ್ನಲಾಗುವುದಿಲ್ಲ.

ಪ್ರತಿದಿನ ಬದಲಾಗುವ ಸಂಸ್ಕೃತಿ ಹಾಗು ಸಮಾಜವು ಧರ್ಮವನ್ನು ಬದಲಾಗುವಂತೆ ಒತ್ತಾಯಿಸುತ್ತದೆ. ಧರ್ಮ ಅಳುತ್ತಾ ಕೂಗುತ್ತಾ ಬದಲಾಗುವುದಕ್ಕೆ ಇಷ್ಟವಿಲ್ಲದೆ ತುಸುತುಸುವೇ ಬದಲಾಗುತ್ತದೆ. ಹಾಗಾಗಿ ಧರ್ಮ ಅಂದರೆ ಏನು ಎಂಬುದಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಅರ್ಥವಿರುತ್ತದೆ. ಮೂಲದಲ್ಲಿ ಮೇಲೆ ಹೇಳಿದ ಧರ್ಮಶಾಸ್ತ್ರದವರ ವಿವರಣೆ ಎಲ್ಲ ಕಾಲಕ್ಕೂ ಹೊಂದುತ್ತದೆ. ಆದರೆ ಎಲ್ಲ ಸಂದರ್ಭಕ್ಕೂ ಹೊಂದದಿರಬಹುದು.

-೨-
ಧರ್ಮ ನಮ್ಮ ಬದುಕಲ್ಲಿ ಕಾಣಿಸಕೊಂಡು, ಅಂಟಿಕೊಳ್ಳುವುದೂ ಗಮನಿಸಬೇಕಾದ ಇನ್ನೊಂದು ಅಂಶ. ಎಲ್ಲಿಯವರೆಗೆ ಇಂದಿನ ಬದುಕಲ್ಲಿ ಹತಾಶೆ ಹಾಗು ಮುಂದಿನ ಬದುಕಲ್ಲಿ ನಮಗೆ ನಿಯಂತ್ರಣ ಇರುವುದಿಲ್ಲವೋ - ಅಲ್ಲಿಯವರೆಗೂ ಧರ್ಮ, ದೇವರು, ಆಧ್ಯಾತ್ಮ ನಮ್ಮ ನೆರವಿಗೆ ಬೇಕಾಗುತ್ತದೆ. ಇದರ ಅಗತ್ಯವನ್ನು ನೀವು ವೈಚಾರಿಕವಾಗಿ ಬೆಂಬಲಿಸಬಹುದು ಅಥವಾ ಭಾವನಾತ್ಮಕವಾಗಿ ಬೆಂಬಲಿಸಬಹುದು. ಆದರೆ ಮೂಲದ ಹತಾಶೆಯನ್ನು ಹೋಗಲಾಡಿಸುವುದು ಹಾಗು ನಿಯಂತ್ರಣವನ್ನು ಮತ್ತೆ ಪಡೆದುಕೊಳ್ಳುವುದು ಹಲವಾರು ಕಾರಣಕ್ಕೆ ಮುಖ್ಯವಾಗುತ್ತದೆ.

ಇಲ್ಲೊಂದು ವಿಪರ್ಯಾಸ ಗಮನಿಸಿ. ಮನುಷ್ಯನ ನೆರವಿಗೆ ಧಾವಿಸುವ ಧರ್ಮ/ಆಧ್ಯಾತ್ಮ ಜನರಲ್ಲಿ ಬದುಕಿನ ಬಗ್ಗೆ ಹತಾಶೆ ನಿರಂತರವಾಗುವಂತೆ ನೋಡಿಕೊಳ್ಳುತ್ತದೆ. ಹತಾಶೆ ಕಡಿಮೆಯಾದಾಗ ಅದನ್ನು ಜಾಗೃತಗೊಳಿಸುತ್ತದೆ. ಹಾಗೆಯೇ ನಮ್ಮ ಬದುಕು/ಭವಿಷ್ಯದ ಮೇಲೆ ನಮಗಿರಬೇಕಾದ ನಿಯಂತ್ರಣವನ್ನು ತಿರಸ್ಕರಿಸಿ, ದೇವರು/ನಂಬಿಕೆಗಳನ್ನು ತರುತ್ತದೆ. ಆ ಮೂಲಕವಾಗಿ ನಿಯಂತ್ರಣವನ್ನು ಸಡಿಲಗೊಳಿಸುವ ಕೆಲಸವನ್ನು ಸತತವಾಗಿ ಮಾಡುತ್ತಿರುತ್ತದೆ.

-೩-
ಮನುಷ್ಯ ಯಾವತ್ತೂ ತನ್ನನ್ನು ತಾನು ವಿವರಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತಾನೆ. ಇದು ಬರೇ ಪದ ಮಾತುಗಳ ಮೂಲಕವಷ್ಟೇ ಅಲ್ಲ. ಕ್ರಿಯೆಗಳ ಮೂಲಕವೂ ಕೂಡ. ಮತ್ತು ಈ ವಿವರಿಸುವ ಕೆಲಸ ಬೇಡವೆಂದರೂ ನಡೆಯುತ್ತಿರುತ್ತದೆ. ಆದರೆ ಆಧುನಿಕ ಯುಗದಲ್ಲಿ ಅದು ನಮಗೆ ಬೇಕಾದ ಹಾಗೆ ಆಗುತ್ತಿಲ್ಲ. ಮತ್ತು ಅದು ದಿನದಿನಕ್ಕೂ ಕಷ್ಟವಾಗುತ್ತಿದೆ. ಎಲ್ಲವೂ ಪುಡಿಪುಡಿಯಾದ ಪ್ರಯತ್ನಗಳಾಗುತ್ತಿವೆ. ಪೂರ್ಣವಾಗಿ ವಿವರಿಸಿಕೊಳ್ಳುವ ಹಂಬಲ ನಮಗೆ ಇರುವವರೆಗೂ - ಅದಕ್ಕೊಂದು ಶಾರ್ಟ್ ಕಟ್ ರೂಪದಲ್ಲಿ ಸರಳೀಕೃತವಾಗಿ ಧರ್ಮ ಬೇಕಾಗುತ್ತದೆ. ಆ ಬಗೆಯ ವಿವರಣೆ ತುಂಬಾ ಜಡವಾದ ವಿವರಣೆಯಾಗಿರುತ್ತದೆ. ಬದಲಾಗುತ್ತಿರುವ ಪರಿಸ್ಥಿತಿ, ಮೌಲ್ಯ ಹಾಗು ಮನುಷ್ಯನ ಒಳಗನ್ನು ವಿವರಿಸಲು ಧರ್ಮ ಸೋಲುತ್ತದೆ ಎಂಬುದು ನಮಗೆಲ್ಲಾ ಆಗಾಗ ಅರಿವಿಗೆ ಬಂದೇ ಇರುತ್ತದೆ. ಆದರೆ ಅದನ್ನು ನಮ್ಮದೇ ಕುಂದು ಎಂದು ಸಮಜಾಯಿಷಿ ಹೇಳಿಕೊಳ್ಳುತ್ತೇವೆ.

ನಮ್ಮನ್ನು ನಾವು ವಿವರಿಸಿಕೊಳ್ಳುವುದು ದಿಟಕ್ಕೂ ಜಟಿಲವಾದ ಸಂಗತಿ; ವಿವರಿಸಿಕೊಂಡೇ ಎನ್ನುವಾಗಲೂ ಮತ್ತೇನೋ ಆಗಿರುತ್ತದೆ, ಹೊಸದೇನೋ ಬಂದು ಸೇರಿಕೊಂಡು, ಇನ್ನೇನೋ ಕಳೆದಿರುತ್ತದೆ. ಇದು ವಯ್ಯಕ್ತಿಕವಷ್ಟೇ ಅಲ್ಲ, ಜಾಗತಿಕವಾಗಿಯೂ ನಮ್ಮ ವಿವರಣೆ ಹಲವಾರು ಹೊಡೆತಗಳಿಗೆ ಒಳಪಡುತ್ತದೆ. "ಒಂದು ವಿವರಣೆ", "ಪೂರ್ಣ ವಿವರಣೆ" ಸಾಧ್ಯವೇ ಇಲ್ಲದಂತೆ ಆಗಿದೆ. (ಹಾಗೆ ನೋಡಿದರೆ, ಅದು ಎಂದೂ ಸಾಧ್ಯವಿರಲಿಲ್ಲ!)

ಇವನ್ನೆಲ್ಲಾ ಮನಗಂಡಾಗಲೇ, ಗೊಡ್ಡಲ್ಲದ, ಜಡವಲ್ಲದ ಹೊಸ ಬಗೆಗಳಲ್ಲಿ ನಮ್ಮನ್ನು ವಿವರಿಸಿಕೊಳ್ಳುವ ಸಣ್ಣಪುಟ್ಟ ದಾರಿಗಳು ತೆರೆದುಕೊಳ್ಳುತ್ತವೆ. ಆಗ ಧರ್ಮದ ನೆರವು ಬೇಕಾಗುವುದಿಲ್ಲ - ಅಷ್ಟೇ ಅಲ್ಲ ಅದು ತೊಡರೇ ಆಗಿರುತ್ತದೆ. ಧರ್ಮವನ್ನು ಬಿಟ್ಟು ಮುನ್ನಡೆಯುವದೇ ಮೊದಲ ಅರ್ಥಪೂರ್ಣ ಹೆಜ್ಜೆಯಾಗುತ್ತದೆ.

7.11.08

ಕನಸಿನ ಪ್ರಾಯ ಹಾಗು ಮರೆತದ್ದು

ಕನಸಿನ ಪ್ರಾಯ

"ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
ಇಳಿವಯಸ್ಸಲ್ಲಿ ಕನಸುಳಿಸಿಕೊಂಡವರು ಧನ್ಯರಂತೆ"
ಎನ್ನುವುದು ಬರೀ ಪ್ರಾಸಕ್ಕಾಗಿ ಅಲ್ಲ, ಅಲ್ಲವೆ?

.

.

.

ಮರೆತದ್ದು

ನನ್ನ ಲೋಕಟ್ ವಯ್ಯಾರ ನೋಡಿ
ಹಿರಿಯತ್ತಿಗೆ ನಗುತ್ತಾ ನಲ್ಮೆಯಿಂದ-
"ನಿನಗೂ ಸೆರಗು ಬೇಕಾಗತ್ತೆ ನೋಡು ಒಂದು ದಿನ"
ಎಂದು ನಕ್ಕು - ಯಾಕೆಂದು ಹೇಳಿರಲಿಲ್ಲ.
ಹೇಳಿದ್ದರೂ ಕೇಳಿಸಿರಲಿಲ್ಲ.
ಕೇಳಿಸಿದ್ದರೂ ಈಗದು ಬೇಕಿಲ್ಲ.

30.10.08

ಭೈರಪ್ಪನವರ "ಸಂಶೋಧನೆ"

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು http://www.christianaggression.org/features_statistics.php ಕೊಟ್ಟರು. ಆ ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.

ಭೈರಪ್ಪನವರ ಅಂಕಿ-ಅಂಶದ ಮೂಲ ಒಂದು ಅನಾಮಿಕ ವೆಬ್‌ಸೈಟ್. ಅನಾಮಿಕವಾಗಿರೋದು ತಪ್ಪೇನಲ್ಲ. ಆದರೆ ಬೇಜವಾಬ್ದಾರಿ ಮಾತುಗಳನ್ನು ಹೇಳುವುದಕ್ಕಾಗಿಯೇ ಅನಾಮಿಕರಾಗಿರೋದು ಅಪಾಯ. ಕ್ರಿಶ್ಚಿಯಾನಿಟಿಯನ್ನು ದೂರುತ್ತಾ ಉಳಿದವರನ್ನು “ಸಂತುಷ್ಟ”ರನ್ನಾಗಿಸುವ ಉತ್ಕಟ ಆಸೆ ಅದರ ಎಲ್ಲ ಹಾಳೆಗಳಲ್ಲಿ ನೀವು ಕಾಣಬಹುದು. ಅಂತಹವು ಎಲ್ಲ ಧರ್ಮಗಳ ವಿರುದ್ಧ ಹಲವು ವೆಬ್‌ಸೈಟುಗಳಿವೆ ಅನ್ನುವುದೂ ನಿಜ.

ವಿಷಯ ಅದಲ್ಲ. ಅಲ್ಲಿಂದ ಅನಾಮತ್ತಾಗಿ ತಮ್ಮ ಅಂಕಿ-ಅಂಶಗಳನ್ನು ಎತ್ತಿಕೊಂಡಿರುವ ಭೈರಪ್ಪನವರು ತಮ್ಮ ಪತ್ರಿಕೆಯ ಲೇಖನದಲ್ಲಿ ಅದರ ಹೆಸರು ಹೇಳಿಲ್ಲ. ಭೈರಪ್ಪನವರಿಗೂ, ಆ ವೆಬ್‌ಸೈಟಿಗೂ ಒಂದು ಕಾಮನ್ ಮೂಲ ಇರಬಹುದು. ವೆಬ್‌ಸೈಟಿನವರೂ ಅದನ್ನು ಹೇಳಿಲ್ಲದೇ ಇರೋದರಿಂದ. ಭೈರಪ್ಪರ ಬರಹಕ್ಕಿಂತ ಮುಂಚೆಯೇ ಆ ವೆಬ್‌ಸೈಟಿರೋದರಿಂದ, ಅಲ್ಲಿಂದ ಎತ್ತಿಕೊಂಡಿದ್ದಾರೆ ಅಂದುಕೊಳ್ಳಲು ಅಡ್ಡಿಯಿಲ್ಲ.

ಕನ್ನಡದ ಹೆಸರಾಂತ, “ಜವಾಬ್ದಾರಿಯುತ(?)”, ಲೇಖಕ ಹೀಗೆ ಮೂಲ ಹೇಳದೆ ತನ್ನದೇ ಸಂಶೋಧನೆ ಎಂಬಂತೆ ಬರಿಯುವುದು ಬರೀ ತಪ್ಪಷ್ಟೇ ಅಲ್ಲ - ಸಂಶೋಧಕರ ಪ್ರಕಾರ “ಘೋರ ಅಪರಾಧ” ಕೂಡ. ತತ್ವಶಾಸ್ತ್ರದ ಕಂಪಾರಿಟಿವ್ ಸ್ಟಡಿ ಎಂಬಂತ ಸಂಶೋಧನೆ ಮಾಡಿರುವ ಭೈರಪ್ಪನವರಿಗೆ ಇದು ತಿಳಿಯದ ಸಂಗತಿಯಲ್ಲ. ತಿಳಿದಿದ್ದೂ ಮಾಡುವುದರ ಹಿಂದಿನ ಉದ್ದೇಶ, ಕುಟಿಲತೆ ಅಪಾಯಕಾರಿ. ಇಂಟರ್ನೆಟ್ ಕೈಗೆಟುಕದ ಎಷ್ಟೋ ಮಂದಿ ಓದುಗರು ಇವರ ಮಾತುಗಳನ್ನು “ಸಾಬೀತಾದ ಮಾತು” ಎಂದು ಪರಿಗಣಿಸುವ ಅಪಾಯವಿದೆ. “ಅಗಾಧ ಸಂಶೋಧನೆಯ ಫಲ” ಅಂದುಕೊಳ್ಳುವ ಅಪಾಯವಿದೆ. ಹೆಸರಾಂತ ಪತ್ರಿಕೆಯ ಬೆಂಬಲ ಇರುವುದರಿಂದ ಜನರ ಮನಸ್ಸನ್ನು ಕೆಡಿಸುವ ಅಪಾಯವಂತೂ ಇದ್ದೇ ಇದೆ.

ಹೀಗೆಲ್ಲಾ ಏಕೆ ಅಂದುಕೊಳ್ಳುತ್ತಿದ್ದೇನೆಂದು ಕೆಳಗಿನ ಎರಡು ಭಾಗಗಳನ್ನು ಗಮನಿಸಿದರೆ ನಿಮಗೇ ಗಟ್ಟಿಯಾಗುತ್ತದೆ. ಇವಲ್ಲದೆ ಆ ಲೇಖನದಲ್ಲಿ ಬೇರೆ ಹಲವು ಮಾಹಿತಿಗಳು ಇವೆ. ಇವನ್ನು ನೋಡಿದ ಮೇಲೆ ಅವುಗಳನ್ನೂ ಅನುಮಾನದಿಂದಲೇ ನೋಡಬೇಕಾಗುತ್ತದೆ. ಎಡಗಡೆ ಭೈರಪ್ಪನವರ ಲೇಖನದ ತುಣುಕುಗಳು, ಎಡಗಡೆ ಆ ಅನಾಮಿಕ ವೆಬ್‌ಸೈಟಿನ ತುಣುಕುಗಳು.



ಕಡೆಗೆ ಇದು “ಪ್ರಾಮಾಣಿಕ” “ಜವಾಬ್ದಾರಿಯುತ” ಭೈರಪ್ಪನವರು ಉಳಿದವರಿಗೆ ಕೊಡುವ ಉಪದೇಶ!

26.10.08

ಭೈರಪ್ಪನ್ನ ನಂಬಿಕೊಂಡರೆ ಪರೀಕ್ಷೆ ಫೇಲ್!

ಭೈರಪ್ಪನ ಮೇಲೆ ನನಗಿರುವಂತೇ ಅಗಾಧ ಪ್ರೀತಿಯಿಂದ ಅವರು ಹೇಳೋದನ್ನ ನಂಬಿಕೊಂಡು ಅವರ ಲೇಖನವನ್ನು ಮನೆಯಲ್ಲಿ ಎಲ್ಲರಿಗೆ ಕಾಣೋ ಹಾಗೆ ಇಡಬೇಡಿ. ಕನಿಷ್ಟ ನಿಮ್ಮ ಮಕ್ಕಳ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ಯಾಕೆಂದರೆ, ಅದನ್ನು ನೋಡಿಕೊಂಡು ಹೋಗಿ ನಿಮ್ಮ ಮಕ್ಕಳು ಪರೀಕ್ಷೆ ಬರೆದರೆ ಫೇಲ್ ಆಗೋ ಸಾಧ್ಯತೇನೇ ಹೆಚ್ಚು.

ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ. ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು.

20.10.08

ಹೊಳಪು, ಅರಸಿದ್ದು

ಹೊಳಪು

ಐವತ್ತು ದಾಟಿದ ಅತ್ಯಂತ ಚೆಲುವೆಯ
ಕಣ್ಣಲ್ಲಿ ಕಂಡಿದ್ದು-
ತನ್ನ ಚೆಲುವಿನ ಬಗ್ಗೆ
ಅಗಾಧ ಅರಿವು ಮತ್ತು ಸಮಾಧಾನ.

.

.

ಅರಸಿದ್ದು

ಕಾಮನ ಬಿಲ್ಲಿನ
ಮಾಯದ ಬುಡದಲಿ
ಭೋಗದ ಕುಡಿಕೆ-
ಇದೆಯೆಂದರೆ ಇದೆ,
ಇಲ್ಲವೆಂದರೆ ಇಲ್ಲ-
ಅಲ್ಲವೇನೋ ನಲ್ಲ?