8.10.08

ಪತನದ ಕತೆ


ಮೊನ್ನೆ "ಡೌನ್‌ಫಾಲ್" ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾಲದಲ್ಲಿ ಅವನನ್ನು ಹತ್ತಿರದಿಂದ ನೋಡುವ, ಹಲವು ಚರಿತ್ರೆ ಮತ್ತು ಆತ್ಮಚರಿತ್ರೆಯ ಪುಸ್ತಕಗಳನ್ನು ಆಧರಿಸಿದ ಈ ಚಿತ್ರಕ್ಕೆ ವಿಚಿತ್ರ ಮೋಹಕ ಶಕ್ತಿಯಿದೆ. ಹಿಟ್ಲರನ ಬಗ್ಗೆ ಹೊಸದಾಗಿ ಕಣ್ಣು ತೆರೆಸುವಂತಹ ಸಂಗತಿಗಳೇನೂ ಇಲ್ಲಿಲ್ಲ. ಆದರೆ ಸಾವಿಗೆ ಹತ್ತಿರ ನಿಂತ ಅವನ ನಡೆವಳಿಕೆ, ಉಳಿದ ಮನುಷ್ಯರಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದು ಒಂದಂಶವಾದರೆ, ಜಗತ್ತಿನ ಮಹಾಕೃತ್ಯವೊಂದಕ್ಕೆ ಕೇವಲ ಒಬ್ಬ ಮನುಷ್ಯ ಎಷ್ಟು ಮತ್ತು ಹೇಗೆ ಕಾರಣನಾಗಬಲ್ಲ ಎಂಬುದು ಇನ್ನೊಂದು.

೨೦೦೪ರಲ್ಲಿ ತಯಾರಾದ, ಜರ್ಮನ್ ಭಾಷೆಯ ಈ ಚಿತ್ರದಲ್ಲಿ ಜರ್ಮನರು ತಮಗೆ ತಾವೇ ಹಿಟ್ಲರನ ಕತೆಯನ್ನು ಹೇಳಿಕೊಂಡಂತಿದೆ. "ಡೌನಫಾಲ್" ಹಿಟ್ಲರನನ್ನು ಮಾನವೀಯ ಗೊಳಿಸಿಬಿಟ್ಟಿತೇ ಎಂಬ ಗೊಂದಲ ಹಾಗು ಅನುಮಾನದ ಬಗ್ಗೆ ಜರ್ಮನರು ಚರ್ಚೆ ನಡೆಸಿದ್ದಾರೆ. ಆರು ಮಿಲಿಯನ್ ಯಹೂದ್ಯರ ಕೊಂದ ಹಿಟ್ಲರನನ್ನು ಲೋಕಕ್ಕೆ ಕೊಟ್ಟ ಜರ್ಮನಿಯ ಜನರಿಗೆ, ಒಬ್ಬ ಸಾಮಾನ್ಯನ ಅಮಾನುಷತೆಯನ್ನು ಅರಿಯುವುದು ಎಷ್ಟು ಮುಖ್ಯ ಎಂದು ಚೆನ್ನಾಗಿ ಗೊತ್ತಿರುವಂತಿದೆ.

ಎಲ್ಲ ಬದಿಯಿಂದಲೂ ಸೋಲುತ್ತಿದ್ದ ಹಿಟ್ಲರನ, ಡ್ರಗ್ ಅಡಿಕ್ಟ್‌ ಆಗಿಬಿಟ್ಟಿದ್ದ ಹಿಟ್ಲರನ, ಸದಾ ಅದುರುವ ಕೈಗಳ ಹಿಟ್ಲರನ, ಸಾವನ್ನು ಹೊತ್ತ ಕಣ್ಣುಗಳ ಹಿಟ್ಲರನ, ಸಾವಿಗೆ ಹತ್ತಿರವಾಗುತ್ತಾ ಹೋದಂತೆ ನಿರಾಶನಾಗುತ್ತಾ ಹೋಗುವ ಸರ್ವಾಧಿಕಾರಿ ಹಿಟ್ಲರನ ತೀಕ್ಷ್ಣ ಚಿತ್ರಣವಿಲ್ಲಿದೆ

ರಷ್ಯದ ರೆಡ್‌ ಆರ್ಮಿಯೆದುರು ತಮ್ಮನ್ನೇ ರಕ್ಷಿಸಿಕೊಳ್ಳಲಾಗದ ಸೈನ್ಯದಿಂದ ಹಿಟ್ಲರ್ ಕಡೆ ಗಳಿಗೆಯಲ್ಲಿ ರಕ್ಷಣೆ ಅಪೇಕ್ಷಿಸುತ್ತಾನೆ. ವೈರಿ ಹಿಡಿತವನ್ನು ಒಡೆದು ತನ್ನ ಸೈನ್ಯ ಬರ್ಲಿನ್‌ನನ್ನು ಹೇಗೋ ಪಾರು ಮಾಡಿಬಿಡುತ್ತದೆ ಎಂದು ಬಡಬಡಿಸುತ್ತಾನೆ. ಅವನ ಮರುಳಿಗೆ ಅವನನ್ನು ಸುತ್ತವರಿದ ಯುದ್ಧಪರಿಣಿತ ಜನರಲ್‌ಗಳು ಕಣ್ಕಣ್ಣು ಬಿಡುತ್ತಾರೆ, ಭಯದಲ್ಲಿ ನಡುಗುತ್ತಾರೆ. ಬಂಕರಿನಲ್ಲಿ ಬೆವರುತ್ತಾ ಸೈನ್ಯಾಲಂಕೃತ ನಿರ್ಜೀವ ಬೊಂಬೆಗಳಾಗುತ್ತಾರೆ. ಅಲ್ಲಿಯವರೆಗೂ ಅವನ ಮಹಾತ್ವಾಕಾಂಕ್ಷೆಯನ್ನು ಇವರೆಲ್ಲಾ ಪೋಷಿಸುತ್ತಾ ಬಂದವರು. ಈಗಲೂ ಯುದ್ಧವಿದ್ಯೆ ಗೊತ್ತಿರದ ಹಿಟ್ಲರ್‍ನ ಹುಚ್ಚು ಐಡಿಯಾಗಳನ್ನು, ಅವನ ಧೂರ್ತ ಸುಳ್ಳುಗಳನ್ನು, ಅವನ ಜನಾಂಗ ದ್ವೇಷವನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವುದು ಅತಿವಾಸ್ತವವಾಗಿ ಕಾಣುತ್ತದೆ. ಏಕೆಂದರೆ ಅವರೆಲ್ಲರ ಮುಂದಿದ್ದದ್ದು ಸಾವೊಂದೆ. ಮತ್ತು ಅದರ ನಿಚ್ಚಳ ಅರಿವು ಅವರಿಗೆಲ್ಲಾ ಇದ್ದಿತ್ತು ಕೂಡ.

ತನ್ನ ನಾಯಿಯ ಸಾವನ್ನು ಕಣ್ಣಾರೆ ನೋಡಲಾಗದ ಹಿಟ್ಲರ್, ಹತ್ತಿರದವರನ್ನು ತುಂಬಾ ಕೇರಿಂಗಾಗಿ ನೋಡುವ ಹಿಟ್ಲರ್, "ಹೇಗೆ ಅಷ್ಟು ಧೂರ್ತ ಮಾತುಗಳನ್ನಾಡಬಲ್ಲ" ಎಂದು ಅವನ ಸಣ್ಣ ವಯಸ್ಸಿನ ಸೆಕ್ರೆಟರಿ ಹಿಟ್ಲರನ ಸಂಗಾತಿ ಈವಾಳನ್ನು ಕೇಳುತ್ತಾಳೆ. ಮರು ಕ್ಷಣ ತನ್ನ ಮಾತಿನಲ್ಲಿರುವ ವಿರೋಧಾಭಾಸ ಮತ್ತು ಅದರ ವಿಷಣ್ಣತೆಯ ಅರಿವಾದವಳಂತೆ ಮುಖ ಕೆಳಗೆ ಹಾಕಿ ಬಿಕ್ಕುತ್ತಾಳೆ. ಕ್ರೂರಿಯೋ ಮುಗ್ಧನೋ ಎಂಬ ಅನುಮಾನ ಹುಟ್ಟಿಸುವಂತೆ- "ನಾನು ಜರ್ಮನಿಯನ್ನು ಯಹೂದ್ಯರಿಂದ ಕಾಪಾಡಿದ್ದು ಯಾರಿಗೂ ಅರ್ಥವಾಗುವುದಿಲ್ಲವಲ್ಲ?" ಎಂದು ಹಿಟ್ಲರ್ ಒಂದು ಕಡೆ ಕೇಳಿಕೇಳುತ್ತಾನೆ. ಆ ಪ್ರಶ್ನೆ ಚಿತ್ರದ ದೇಶ, ಕಾಲ, ಚರಿತ್ರೆಯನ್ನು ಮೀರಿ ಬಂದು ನಮ್ಮನ್ನು ಕೆಣಕುತ್ತದೆ. ಯಾಕೆಂದರೆ, ಆ ಪ್ರಶ್ನೆ ಒಂದು ಪ್ರಶ್ನೆಯಲ್ಲ. ಅದೊಂದು ಮನಸ್ಥಿತಿ, ಅದಕ್ಕೆ.

ತಾನು ಸತ್ತೊಡನೆ ತನ್ನ ದೇಹ ವೈರಿ ಕೈಗೆ ಸಿಕ್ಕದ ಹಾಗೆ ಸುಡಬೇಕೆಂದು ಹಿಟ್ಲರ್ ಆಜ್ಞೆಯ ದನಿಯಲ್ಲಿ ಯುವಸೈನಿಕನನ್ನು ಬೇಡಿಕೊಳ್ಳುತ್ತಾನೆ. ಅಂತೆಯೇ, ಅವನು ಮತ್ತು ಉಳಿದವರು ಸತ್ತಾಗ, ಯುದ್ಧದ ಭೀಕರತೆಯಲ್ಲೂ ಗ್ಯಾಸೊಲಿನ್ ಸಂಪಾದಿಸಿ ಅವನ ಸೈನಿಕರು ಅವನನ್ನು ಸುಡುವುದು, ಸುಡುವ ಬೆಂಕಿಯ ಮುಂದೆ "ಹೈಲ್ ಹಿಟ್ಲರ್" ಎಂದು ಕೈಯೆತ್ತಿ ನಿಲ್ಲುವುದು, ಮರುಕ್ಷಣ ಹತ್ತಿರದಲ್ಲಿ ಸಿಡಿದ ಬಾಂಬಿಗೆ ಹೆದರಿ ಬಂಕರಿಗೆ ಓಡುವುದು ಭೀಕರತೆಯ ಒಡಲಲ್ಲಿ ತಮಾಷೆಯಾಗಿ ಕಾಣುವುದು ವಿಪರ್ಯಾಸವಲ್ಲ ಅನಿಸುತ್ತದೆ.

ಹಿಟ್ಲರ್ ತನ್ನ ಜೀವ ತೆಗೆದುಕೊಂಡ ಮೇಲೆ, ಅವನ ಅಮಾನುಷತೆಯನ್ನು ಎದುರಾಡದೆ ನೆಚ್ಚಿಕೊಂಡವರೆಲ್ಲಾ ಒಬ್ಬೊಬ್ಬರಾಗಿ ಜೀವ ತೆಕ್ಕೊಳ್ಳುತ್ತಾರೆ. ಒಬ್ಬೊಬ್ಬರದೂ ಒಂದೊಂದು ದಾರುಣ ಕೊನೆ. ಆದರೆ ತೀವ್ರವಾಗಿ ನನ್ನನ್ನು ತಟ್ಟಿದ್ದು ಮಾತ್ರ ಡಾ.ಗೋಬೆಲ್ಸ್‌ನ ಮಕ್ಕಳ ಕೊಲೆ. ಗೋಬೆಲ್ಸನ ಹೆಂಡತಿ ತನ್ನ ಮಕ್ಕಳಿಗೆ ನಿದ್ದೆ ಬರಿಸುವ ಮದ್ದು ತರುತ್ತಾಳೆ. ಅದರಿಂದ ಪ್ರಜ್ಞೆ ತಪ್ಪಿದ ಬಳಿಕ, ನಿದ್ದೆಯಲ್ಲೇ ಸೈನೇಡ್ ಗುಳಿಗೆ ಕಡಿಸುವ ಹೊಂಚು ಅವಳದು. ಏನೂ ಅರಿಯದ ಅವಳ ಮುದ್ದಾದ ಪುಟ್ಟ ಮಗು ತಾನು ಮದ್ದು ಕುಡಿಯಲು ಪುಕ್ಕಲಲ್ಲ ಎಂದು ಅದನ್ನು ಗುಟಕರಿಸುತ್ತದೆ. ನಂತರ ಎಲ್ಲ ಮಕ್ಕಳೂ ಗುಟುಕರಿಸುತ್ತಾರೆ. ಆದರೆ ಕಡೆಯಲ್ಲಿ ಅವಳ ಹರೆಯದ ಹಿರೀಮಗಳು, ಜೀವನದ ಆಸೆಗಳ ಕಿರುನೋಟ ಕಂಡವಳು, ಸಾವಿನ ಅರ್ಥವಾಗಿರುವವಳು ತಾನು ಕುಡಿಯುವುದಿಲ್ಲ ಎಂದು ಹಟ ಮಾಡುತ್ತಾಳೆ. ಕಠೋರ ಪ್ರೀತಿಯಿಂದ ತಾಯಿ ತನ್ನ ಮಗಳನ್ನು ಅಲುಗಾಡದಂತೆ ಹಿಡಿದು, ಬಾಯಿ ತೆರೆಸಿ "ಕುಡಿ, ಕುಡಿ" ಎಂದು ಕುಡಿಸುತ್ತಾಳೆ. ಮಕ್ಕಳೆಲ್ಲಾ ಚಿರನಿದ್ದೆಗೆ ಜಾರುತ್ತಾರೆ. "ಚೆನ್ನಾಗಿ ಮಲಗಿ ಮಕ್ಕಳೆ" ಎಂದು ತಾಯಿ ದೀಪ ಆರಿಸುತ್ತಾಳೆ. ತೀವ್ರ ಸೈದ್ಧಾಂತಿಕ ಕುರುಡು ಮತ್ತು ಅತೀವ ಪಾಪಪ್ರಜ್ಞೆಯ ತಾಯಿ ಮಾತ್ರ ಹಾಗೆ ನಡಕೊಳ್ಳಬಲ್ಲಳು.

ಕಡೆಯವರೆಗೂ ಬಂಕರಿನಲ್ಲಿದ್ದು ತಪ್ಪಿಸಿಕೊಂಡ ಹಿಟ್ಲರನ ಸೆಕ್ರೆಟರಿ ಟ್ರಾಡ್ಲ್ ಯೂಂಗ್ ಬರೆದ ಪುಸ್ತಕ ಕೂಡ ಈ ಚಿತ್ರಕ್ಕೆ ಒಂದು ಆಧಾರ. ಹಿಟ್ಲರ್ ಸತ್ತ ನಂತರ ವೈರಿ ಪಡೆಯ ನಡುವೆಯೇ ಜಾರಿಕೊಂಡು ಹೋದವಳು, "ರೇಪ್ ಆಫ್ ಬರ್ಲಿನ್" ಎಂದೇ ಹೆಸರಾಗಿರುವ ಪರಿಸ್ಥಿತಿಯಲ್ಲಿ, ರೆಡ್ ಆರ್ಮಿಯ ಸೈನಿಕರಿಂದ ಹಲವು ಸಲ ರೇಪ್ ಆಗಿದ್ದಳು ಎನ್ನುತ್ತಾರೆ. ಆದರೆ ತನ್ನ ಪುಸ್ತಕದಲ್ಲಿ ಅದನ್ನು ಹೇಳಿಕೊಂಡಿಲ್ಲವಂತೆ. ಚಿತ್ರ ಮುಗಿದ ಮೇಲೆ, ವಯಸ್ಸಾದ ಆಕೆ ಟಿವಿ ಸಂದರ್ಶನವೊಂದರಲ್ಲಿ ಮಾತಾಡುತ್ತಾ, "ಅಂದು ಯಹೂದ್ಯರಿಗೆ ಏನಾಗುತ್ತಿತ್ತು ಎಂದು ನಮಗೆಲ್ಲಾ ಗೊತ್ತೇ ಆಗಿರಲಿಲ್ಲ. ಆದರೆ ನಾನು ಹಿಟ್ಲರನ ಕೆಲಸಕ್ಕೆ ಸೇರಿದ ಅದೇ ವರ್ಷ, ನನ್ನ ವಯಸ್ಸಿನವಳೇ ಒಬ್ಬಳು ಹುತಾತ್ಮಳಾದದ್ದು ನಂತರ ತಿಳಿಯಿತು" ಎನ್ನುತ್ತಾಳೆ. ಕ್ಷಣ ತಡೆದು "ಏನೂ ಗೊತ್ತಿರಲಿಲ್ಲ ಎಂದು ಹೇಳಿ ನಾನು ತಪ್ಪಿಸಿಕೊಳ್ಳುವಂತಿಲ್ಲ. ನಮಗೆ ಬೇಕಾಗಿದ್ದರೆ ಏನಾಗುತ್ತಿದೆ ಎಂದು ತಿಳಿದುಕೊಂಡು ಪ್ರತಿಕ್ರಿಯಸಬಹುದಿತ್ತು" ಎಂದು ಸುಮ್ಮನಾಗುತ್ತಾಳೆ. ಚಿತ್ರಗಳು ಸರ್ವಕಾಲಿಕವಾಗುವುದು ಬಹುಶಃ ಇಂತಹ ಮಾತುಗಳಿಂದಲೇ.
(ಚಿತ್ರಗಳು ಸಿನೆಮದ ಡಿವಿಡಿಯಿಂದ ಎಬ್ಬಿಕೊಂಡದ್ದು)

No comments: