5.10.08

ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. ಕೆಲವದರಲ್ಲಿ ಇಂಗ್ಲೀಷಿನ ಒಳ್ಳೊಳ್ಳೇ ಸಾಲುಗಳು ಇರುತ್ತವೆ. ಇನ್ನು ಕೆಲವಲ್ಲಿ ಕೆಟ್ಟಕೆಟ್ಟ ಪ್ರಾಸದ ಸಾಲುಗಳು. ಶುಭದ ಬಗ್ಗೆ, ಬದುಕಿನ ಬಗ್ಗೆ, ವಿಸ್ಮಯದ ಬಗ್ಗೆ, ಪುಣ್ಯ,ಅದೃಷ್ಟದ ಬಗ್ಗೆ ಹಾಗೂ ಪ್ರೀತಿ-ಶಾಂತಿಯ ಬಗ್ಗೆ. ಬಣ್ಣಬಣ್ಣದ್ದು. ಫಳಫಳ ಹೊಳೆಯುವದು. ನನಗೆ ಕೊಳ್ಳೋದಕ್ಕೆ ಕಷ್ಟವೇನಿಲ್ಲ. ಕೈತುಂಬಾ ಸಂಬಳ. ಸರಿಯಾಗಿ ಪರಿಚಯವಿಲ್ಲದವರಿಗೂ ಕಾರ್ಡು ಕಳಿಸಿರುವಾಗ, ನಿನಗೆ ಸ್ವಲ್ಪ ಹೆಚ್ಚಿನ ಬೆಲೆಯದ್ದೇ ಕೊಳ್ಳಬಹುದಿತ್ತು.

ಆದರೆ ನೀನೀಗ ಎಲ್ಲಿದ್ದಿ ಅಂತ ಗೊತ್ತಿಲ್ಲದ್ದರಿಂದ ಗ್ರೀಟಿಂಗ್ ಕಾರ್ಡಿನಿಂದ ಏನೂ ಪ್ರಯೋಜನವಿಲ್ಲ, ಬಿಡು. ಇದರಿಂದ ಬೇಸರವೇನೂ ಇಲ್ಲ. ಯಾಕೆಂದರೆ ನಿನ್ನನ್ನು ಹುಡುಕೋದನ್ನೇ ಬಿಟ್ಟುಬಿಟ್ಟಿದ್ದೇನೆ. ನಿನ್ನನ್ನು ಹುಡಕೋಕೆ ಹೋದರೆ ಈಗೀಗ ಸಿನಿಕತೆ, ಕುಹಕ, ಅನುಮಾನ ಸಿಗತ್ತವೆ. ಅವೆಲ್ಲಾ ಇರಲಿ ಅಂದರೂ, ಅವೆಲ್ಲಾ ಸರಿಯಾದ ಕಾರಣಕ್ಕ ಅನ್ನೋದು ಮುಖ್ಯ ಪ್ರಶ್ನೆ.

ನಿನ್ನನ್ನು ಮರೆತರೇನೂ ನಷ್ಟ ಇಲ್ಲ ಬಿಡು.
ಆದರೆ, ನಿನ್ನ ಬದಲಿಗೆ ಯಾರು ನೆನಪಾಗುತ್ತಾರೆ? ಯಾಕೆ ನೆನಪಾಗುತ್ತಾರೆ? ಇದು ಕೊಂಚ ಜಟಿಲ.
ನಿನ್ನ ಹುಟ್ಟುಹಬ್ಬ ಜಾರಿಹೋದರೂ ನಷ್ಟ ಇಲ್ಲ ಬಿಡು.
ಆದರೆ, ಅದರ ಬದಲಿಗೆ ಏನು ಹುಟ್ಟಿದೆ? ಯಾಕೆ ಹುಟ್ಟಿದೆ? ಇದು ಕೊಂಚ ಜಟಿಲ

ಸ್ವಾರ್ಥಕ್ಕೆ ನಿನ್ನ ನೆನಪು, ಚಿತ್ರ ಬಳಸ್ತೀವಿ ಅನ್ನೋದು ಬರೀ ಬೊಗಳೆ ಮಾತು. ಆದರೆ, ಆರೋಗ್ಯವಾದ ಸ್ವಾರ್ಥ ನಾವಿನ್ನೂ ಕಲೀಬೇಕಿದೆಯಲ್ಲ ಅದು ಜಟಿಲ.

ಈ ನಡುವೆ, ಇಪ್ಪತ್ತೊಂದನೇ ಶತಮಾನದ ಸವಾಲನ್ನು ಎದುರಿಸುವುದಕ್ಕೆ ಮಾತ್ರವಲ್ಲ, ಅದನ್ನು ಸಂಭಾಳಿಸಲು ಹಿಂಬಾಗಿಲಲ್ಲಿ ಹೊಂಚುವವರಿಗೂ ನಿನ್ನ ನೆನಪು ಆದರ್ಶ ಬಂಡವಾಳವಾಗಿದೆಯಲ್ಲ - ಅದು ಕೊಂಚ ಜಟಿಲ!

1 comment:

Unknown said...

ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಅನಿವಾಸಿ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ

ಧನ್ಯವಾದಗಳೊಂದಿಗೆ.....
ಕನ್ನಡ ಹನಿಗಳ ಬಳಗ
kannadajokes@gmail.com