23.7.07

"ಕುವೆಂಪು ಕವಿಯೇ ಅಲ್ಲ"

ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಕುವೆಂಪುರವರ "ರಾಮಾಯಣ ದರ್ಶನಂ" ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. "ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ.
ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ, ಪ್ರತಿಸಲವೂ ಮತ್ತೇನೋ ಹೊಸದು ಕಾಣುತ್ತದೆ. ಮುಂದೆ "ನಾನು ಹಿಂದು, ನಾನು ಬ್ರಾಹ್ಮಣ" ಎಂದು ಪದ್ಯ ಬರೆದು, ಜನಸಂಘಕ್ಕಾಗಿ ಚುನಾವಣೆಗೆ ಕೂಡ ಅಡಿಗರು ನಿಂತಿದ್ದರು. ಯಾಕೋ ತೇಜಸ್ವಿಯವರ ನೆನಪು ಓದುವಾಗ ಅಡಿಗರ ಈ ಎಲ್ಲ ಮಗ್ಗಲು ನೆನಪಾಯಿತು.
ಅಷ್ಟು ತೀಕ್ಷ್ಣವಾಗಿ ಕುವೆಂಪು ಕಾವ್ಯದ ಬಗ್ಗೆ ಪ್ರತಿಕ್ರಯಿಸುವುದಕ್ಕೆ ಅಡಿಗರಿಗಿದ್ದ ಒತ್ತಡದ ಬಗ್ಗೆ ಯೋಚಿಸಿದೆ. ತನ್ನ ಕಾವ್ಯದ ಬಗ್ಗೆ, ಕಾವ್ಯದ ಶೈಲಿಯ ಬಗ್ಗೆ ಆಳವಾದ ವಿಶ್ವಾಸವನ್ನು ಇಂಥ ಪ್ರತಿಕ್ರಿಯೆಗಳು ತೋರುತ್ತವೆಯೆ? ಒಬ್ಬ ಬರಹಗಾರನಿಗೆ, ಅದರಲ್ಲೂ ಅಡಿಗರಂಥ ಪ್ರತಿಭಾವಂತರಿಗೆ ಅಂಥ ಆತ್ಮವಿಶ್ವಾಸ ಸಹಜವೇನೋ? ಅಂಥ ಆತ್ಮವಿಶ್ವಾಸದ ಬಲದ ಮೇಲೇ ಸೂಕ್ಷ್ಮವಾದ, ಗಟ್ಟಿಯಾದ ಕೃತಿಗಳು ಹುಟ್ಟಲು ಸಾಧ್ಯವೇನೋ? ಈಗ ಅನಂತಮೂರ್ತಿಯವರು ಭೈರಪ್ಪನವರ ಬಗ್ಗೆ ಆಡಿದ ಮಾತುಗಳನ್ನು ಈ ವಿಚಾರಗಳ ಬೆಳಕಿನಲ್ಲಿ ನೋಡುವುದು ವಿವಾದದ ಬಿಸಿ ತಗ್ಗಿರುವಾಗ ಸಾಧ್ಯ ಎಂದು ಬಗೆಯುತ್ತೇನೆ. ಅದರಿಂದ ಪ್ರಯೋಜನವೂ ಇದೆ ಎಂದು ನನ್ನ ಎಣಿಕೆ.

ತೇಜಸ್ವಿಯವರು ಅಡಿಗ-ಕುವೆಂಪು ವಿವಾದದ ಬಗ್ಗೆ ಮಾತು ಮುಂದುವರಿಸಿ ಮತ್ತೂ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಆಗಿನ ಕಾಲದ ಹೊಸ ಪೀಳಿಗೆಯ ಬರಹಗಾರರು ಆ ವಿವಾದದ ಬಗ್ಗೆ ತಲೆ ಕೆಡಿಸಿಕೊಳಲಿಲ್ಲ ಎಂದು ಹೇಳುತ್ತಾ ಅದಕ್ಕೆ ಮೂರು ಕಾರಣಗಳನ್ನು ಕೊಡುತ್ತಾರೆ.
ಮೊದಲನೆಯದಾಗಿ - "ಸಮಾಜವಾದೀ ಆಂದೋಳನದಲ್ಲಿ ಭಾಗಿಗಳಾಗಿ ಸಾಹಿತ್ಯ ಕ್ಷೇತ್ರದಿಂದಲೇ ದೂರಾಗುತ್ತಿದ್ದುದು. ಸಾಹಿತ್ಯವನ್ನು ವಿಪರೀತ ಗಂಭೀರವಾಗಿ ಪರಿಗಣಿಸಿ ಶ್ರೇಷ್ಠತೆ ನಮ್ಮ ಜೀವನ್ಮರಣದ ಪ್ರಶ್ನೆ ಎಂದು ಪರಿಭಾವಿಸುವುದು ನಮಗೆ ಆಗ ಭ್ರಾಂತಿಯ ಪರಮಾವಧಿಯಂತೆ ಕಾಣುತ್ತಿತ್ತು."
ಎರಡನೆಯದಾಗಿ - "ಬೇರೆ ಬೇರೆ ಕ್ಷೇತ್ರಗಳ ಚಟುವಟಿಕೆಗಳಿಂದಾಗಿ ದೊರತ ಹೊಸ ಹೊಸ ಮೌಲ್ಯ, ಅಳತೆಗೋಲುಗಳಿಂದ ಇಡೀ ಸಾಹಿತ್ಯ ಕ್ಷೇತ್ರದಲ್ಲೇ ಅರ್ಥವಂತಿಕೆಗಾಗಿ ಹುಡುಕಾಟ ನಡೆಯುತ್ತಿತ್ತು"
ಮೂರನೆಯದಾಗಿ- "ಬಹುಮುಖ್ಯವಾಗಿ ... ಪ್ರತಿಕ್ರಯಿಸಲು ಅಗತ್ಯವಾದ ಧಾರ್ಮಿಕತೆ, ಮತ್ತು ಶ್ರದ್ಧೆಗಳು ಹೊಸ ಪೀಳಿಗೆಯ ಬರಹಗಾರರಲ್ಲಿ ಯಾರಲ್ಲೂ ಇರಲೇ ಇಲ್ಲ ... ಕುವೆಂಪು ಕವಿಯೇ ಅಲ್ಲದೆ ಅಡಿಗರು ಮಾತ್ರವೇ ಕವಿಯೆಂದಾದರೂ ನಮಗೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ಅನ್ನಿಸಿತು"
ಇಷ್ಟು ಹೇಳಿ ನಂತರ ಒಂದು ರೀತಿಯಲ್ಲಿ ಕುವೆಂಪುರವರು ಅಪ್ರಸ್ತುತ ಮತ್ತು ಅರ್ಥಹೀನ ಆಗಿದ್ದರು ಎನ್ನುತ್ತಾರೆ. ಹಾಗೆಯೇ - "ಆಗಿನ ನವ್ಯಕಾವ್ಯದ ಮುಂಚೂಣಿಯಲ್ಲಿದ್ದ ವಿಪ್ರೋತ್ತಮರಿಗೆ ಕುವೆಂಪು ಅವರನ್ನು ಅಮಾನ್ಯಗೊಳಿಸುವ ಭರದಲ್ಲಿ ಅದಕ್ಕಿಂತಲೂ ಆಳವಾಗಿ ತಮ್ಮನ್ನೇ ತಾವು ಅಮಾನ್ಯಗೊಳಿಸಿಕೊಳ್ಳುತ್ತಿರುವುದರ ಪರಿವೆಯೇ ಇರಲಿಲ್ಲ" ಎನ್ನುತ್ತಾರೆ.

ತೇಜಸ್ವಿಯವರ ಈ ಮೇಲಿನ ಮಾತುಗಳ ಬೆಳಕಲ್ಲಿ ನನಗೆ ಒಂದು ಅನುಮಾನ. ಅಂದಿನ ಕುವೆಂಪುವಿನ ಹಾಗೆ, ಭೈರಪ್ಪನವರು ಸಾಹಿತ್ಯಿಕವಾಗಿ ಇಂದು ಅಪ್ರಸ್ತುತರೇ ಮತ್ತು ಅರ್ಥಹೀನರೆ? ಅನಂತಮೂರ್ತಿಯವರ ಮಾತು ಯಾವುದೇ ನಿಜವಾದ ಸಾಹಿತ್ಯಕ ವಿವಾದಕ್ಕೂ ಇಲ್ಲಿ ಎಡೆಮಾಡಿ ಕೊಟ್ಟೇ ಇಲ್ಲ, ಅಲ್ಲವೆ? ಪತ್ರಿಕೆಗಳು ಮತ್ತೊಂದು ಬಿಸಿ ಸುದ್ದಿ ಸಿಕ್ಕುವವರೆಗೂ ಎಡೆಬಿಡದೆ ವಿವಾದವನ್ನು ವರದಿ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ ಅದರಲ್ಲಿ ತಾವೂ ತೊಡಗಿಕೊಂಡಿದ್ದಾರೆ. ಆದರೂ ಇಂದಿನ ಹೊಸ ಪೀಳಿಗೆಯ ಸಾಹಿತಿಗಳು ಈ ವಿವಾದದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಬಣಗಳಾಗಿ ಒಡೆಯದೆ ಉಳಿದಿದ್ದಾರೆ ಅಲ್ಲವೆ? ಹೊಸ ಪೀಳಿಗೆಯ ಬರಹಗಾರರು ಯಾವ ಹೊಸ ಮಗ್ಗುಲಿನ ಶೋಧದಲ್ಲಿ ನಿರತರಾಗಿ ಈ ವಿವಾದವನ್ನು ಕಡೆಗಣಿಸಿದ್ದಾರೆ? ಅವರ ಮೌನ ತಾವು ತಳೆದ ಯಾವ ಆಳದ ತಾತ್ವಿಕ ನಿಲುವನ್ನು ತೋರಿಸುತ್ತದೆ? ಅಥವಾ ಬರೇ ಅವಕಾಶವಂಚಿತರಾಗುವುದಕ್ಕೆ ಹೆದರಿದ ಸಮಯಸಾಧಕತನವೋ ಎಂಬ ಪ್ರಶ್ನೆಯೂ ಕಾಡುತ್ತದೆ. ಉತ್ತರಕ್ಕಾಗಿ ಕಾದು ನೋಡಬೇಕು.

No comments: