31.3.07

ಮಾಯಾಲೋಕ-೧: ವಿಹಾರಾನಂದ

ಇತ್ತೀಚೆಗೆ ಪೂರ್ಣಚಂದ್ರ ತೇಜಸ್ವಿಯವರ ಮಾಯಾಲೋಕ-೧ ಓದಿದೆ. ತುಂಬಾ ಖುಷಿಪಟ್ಟೆ. ರೈಲಿನಲ್ಲಿ ಓದುತ್ತಾ ಉಕ್ಕಿ ಬರುವ ನಗುವನ್ನು ತಡೆದುಕೊಂಡು ಓದುವುದು ಸುಲಭದ ಕೆಲಸವಲ್ಲ. ತೇಜಸ್ವಿಯವರೇ ಹೇಳಿರುವಂತೆ ಹೊಸ ರೀತಿಯ ನಿರೂಪಣೆಯ ವಿನ್ಯಾಸವೂ ಇಷ್ಟವಾಯಿತು. ಒಂದು ರೀತಿಯಲ್ಲಿ ಅತ್ತಿತ್ತ ಹಾಯುತ್ತಾ ಹೋಗುವ ದನಗಳ ಹಾಗೆ ತುಂಬಾ ಆರ್ಗಾನಿಕ್‌ ಆದ ನಿರೂಪಣೆ ನಮ್ಮನ್ನು ಹಳ್ಳಿ, ಕಾಡು, ಊರುಗಳನ್ನು ಸುತ್ತಿಸುತ್ತಾ ಅಲ್ಲಿಯ ಅತ್ಯಂತ ಮೋಜಿನ ಪ್ರಸಂಗಗಳಲ್ಲಿ ಹತ್ತು ಹಲವಾರು ಪಾತ್ರಗಳ ಕ್ರಿಯೆ ಚಿಂತನೆಗಳ ಮೂಲಕ ನಮ್ಮನ್ನು ಹಾಯ್ದು ಹೋಗುವಂತೆ ಈ ಕಾದಂಬರಿ ಮಾಡುತ್ತದೆ. ಮಾಯಾಲೋಕದಲ್ಲಿ ಮುಳುಗೆದ್ದು ಬಂದಂತೆ ತೇಜಸ್ವಿ ಒಂದು ಕಡೆ ಹೇಳಿರುವಂತೆ ಹಳ್ಳಿಗಳ ಒಳಗೆ ನಡೆಯುತ್ತಿರುವ ತೀವ್ರತಮ ಬದಲಾವಣೆಗಳತ್ತ ನಮ್ಮ ಗಮನವನ್ನು ಸಮರ್ಥವಾಗಿ ಎಳೆಯುತ್ತದೆ. ಕಾದಂಬರಿ ಮುಗಿಯುವ ಹೊತ್ತಿಗೆ ಆ ಪಾತ್ರಗಳು ನಮಗೆ ತೀರ ಹತ್ತಿರವಾಗಿ ಬಿಟ್ಟಿರುತ್ತಾರೆ. ಕಾದಂಬರಿ ಓದುವ ಮುಂಚೆ, "ಕೊಲಾಜ್" ರೀತಿಯ ನಿರೂಪಣೆ ಕತೆ ಪಾತ್ರಗಳನ್ನು ಓದುಗನಿಂದ ಏಲಿಯನೇಟ್‌ ಮಾಡುತ್ತದೋ ಎಂದು ಅನಿಸಿತ್ತು. ಹಾಗೆ ಆಗಲೇ ಇಲ್ಲ. ಓದು ಮುಗಿಸಿದ ಮೇಲೆ ಇದು ನಿಜವಾಗಿಯೂ "ಕೊಲಾಜ್" ಮಾದರಿ ಅಲ್ಲವಲ್ಲ ಎಂದು ಕೂಡ ಅನ್ನಿಸಿತು. ಯಾಕಂದರೆ ಹಲವಾರು ಕತೆಗಳು ಒಂದಕ್ಕೊಂದು ಅಡ್ಡ ಬರುವಂತೆ ಹಾದು ಹೋಗುತ್ತದೆ. ಆದರೆ ಒಂದು ಕೇಂದ್ರಬಿಂದುವಿನ ಸುತ್ತ ಸುತ್ತುತ್ತದೆ. ಹಳ್ಳಿ, ಅಲ್ಲಿಯ ಪಾತ್ರಗಳು ಇತ್ಯಾದಿ. ಹಾಗಾಗಿ ಮೊದಲ ಒಂದಷ್ಟು ಪುಟಗಳು ಹೊಸ ಪಾತ್ರಗಳು, ಕತೆಗಳು ಬಂದ ಮೇಲೆ, ಮತ್ತವೇ ಸುತ್ತುತ್ತಾ ಬರುವುದರಿಂದ, ಕತೆಯನ್ನು ಮುಂದುವರಿಸುವುದರಿಂದ ಬಿಡಿಬಿಡಿಯಾದ ಎಲಿಮೆಂಟ್ಸ್ ಆಗುವುದಿಲ್ಲ. ಇದು ನನ್ನ ಓದಿಗೆ ಕಷ್ಟವೇನೂ ಆಗಲಿಲ್ಲ. ಆದರೆ ಓದಿನ ನಂತರದ ನನ್ನ ಯೋಚನೆ ಅಷ್ಟೆ. ಇನ್ನೊಂದು ವಿಷಯ: ಕತೆಯ ನಿರೂಪಕನ ಬಗ್ಗೆ ನಮಗೆ ಹೆಚ್ಚು ತಿಳಿಯುವುದಿಲ್ಲ. ಮಗಳ ಜತೆ ಹಾವು ಹಿಡಿಯುವ ಸಂದರ್ಭ, ಹೆಂಡತಿಯ ಬಗ್ಗೆ ಒಂದೆರಡು ಮಾತು, ಮತ್ತು ನಿರೂಪಕನ ನಾಯಿ ಬಿಟ್ಟರೆ ಹೆಚ್ಚು ಹೇಳುವುದಿಲ್ಲ. ನಿರೂಪಕನ ನೇರ ಮಾತುಗಳು ಇದ್ದರೂ ಕೂಡ, ನಿರೂಪಕನ ಬಗ್ಗೆ ಹೆಚ್ಚು ತಿಳಿಯುವ ಹಂಬಲ ನನ್ನ ಮನಸ್ಸಿನಲ್ಲಿ ಓದುವಾಗಲೇ ಹಾದು ಹೋಯಿತು. ತೇಜಸ್ವಿಯವರ ಚಿತ್ರವೇ ನಮ್ಮ ಮನಸ್ಸಿನಲ್ಲಿ ಅವರು ಮಾತುಗಳನ್ನಾಡುವಾಗ ಹಾದು ಹೋಗುತ್ತದೆ. ಕಾದಂಬರಿಯ ಕಡೆಯಲ್ಲಿ ಬರುವ ಭಾಗವಂತೂ ಅದ್ಭುತವಾಗಿದೆ. ಕಾದಂಬರಿಯಿಡೀ ನಡೆಯುವ ವಿದ್ಯಮಾನಗಳು, ಕ್ರಿಯೆಗಳು ಎಲ್ಲ ನಿಂತು ಒಂದು ರೀತಿಯ ಧ್ಯಾನಸ್ತವಾಗುವ ನಿರೂಪಣೆ, ಮಳೆ ಬರುವ ಹಿನ್ನೆಲೆಯಲ್ಲಿ ಅತ್ಯಂತ ಖುಷಿಕೊಟ್ಟಿತು. ಹದಿನೈದು ವರ್ಷಗಳ ನಂತರ ಮತ್ತೆ "ಚಿದಂಬರ ರಹಸ್ಯ" ಓದಬೇಕು ಅನ್ನಿಸುತ್ತಿದೆ.

No comments: