31.3.07

ಇಂಗ್‌ಮಾರ್‌ ಎಂಬ ಕುನ್ನಿಯ ಬದುಕು

ನಾಯಿಮರಿಯಾಗಿ ನನ್ನ ಬದುಕು (my life as a dog --1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.
ಅಸ್ವಸ್ಥ ಅಮ್ಮ, ತುಂಟ ಅಣ್ಣ, ಸೋದರ ಮಾವ, ಅವನ ಊರಿನ ಜನ ಎಲ್ಲರ ನಡುವೆ ಸುಮಾರು ಹತ್ತು ವರ್ಷದ ವಿಲಕ್ಷಣ ಪ್ರಕೃತಿಯ ಇಂಗ್‌ಮಾರ್‍. ಜಗತ್ತಿನಲ್ಲಾಗುತ್ತಿರುವ ಅತಿದಾರುಣ ಘಟನೆಗಳ ನಡುವೆ ತನ್ನ ಕಷ್ಟಗಳು ಕಷ್ಟಗಳೇ ಅಲ್ಲ ಎಂದು ವಿವರಿಸಿಕೊಳ್ಳುತ್ತಾ ಹೋಗುತ್ತಾನೆ. ಸ್ಪುಟ್ನಿಕ್‌ನಲ್ಲಿ ಲೈಕಾ ಎಂಬ ನಾಯಿಮರಿಯನ್ನು ಇಟ್ಟು ಕಳಿಸಿದ್ದು ಮೊದಲಿಗೆ ಅವನನ್ನು ಕಾಡಲು ಶುರುಮಾಡುತ್ತದೆ. ಅಸ್ವಸ್ಥ ತಾಯಿ ಆರಾಮ ಪಡೆಯಲಿ ಎಂದು ಇಂಗ್‌ಮಾರ್‍ನನ್ನು ಸೋದರಮಾವನ ಹಳ್ಳಿಗೆ ಅವನ ಇಷ್ಟದ ವಿರುದ್ಧ ಕಳಿಸಿದಾಗ ತನ್ನ ನಾಯಿಮರಿ ಸಿಕ್‌ಯಾನ್‌ನಿಂದ ವಿಯೋಗವಾಗುತ್ತದೆ. ಅಲ್ಲಿ ಬೇಸಿಗೆಯ ಜೀವೋನ್ಮಾದಕ ಪರಿಸರದಲ್ಲಿ ಹೊಸ ಜನ, ಹೊಸ ಗೆಳೆಯ ಗೆಳೆತಿಯರೊಂದಿಗೆ ಸ್ನೇಹವಾಗುತ್ತದೆ. ತನ್ನ ಲೈಂಗಿಕತೆಯ ಅರಿವಾಗುತ್ತಾ ಹೋಗುತ್ತದೆ.
ನಂತರ ಅಸ್ವಸ್ಥ ತಾಯಿಗೆ ನೀಡಿದ ಚುಟುಕು ಭೇಟಿ ಅವನ ಜೀವವನ್ನೇ ಅಲುಗಾಡಿಸಿಬಿಡುತ್ತದೆ. ಮತ್ತೆ ಸೋದರಮಾವನ ಮನೆಗೆ ಬಂದಾಗ ಹಿಮಾಚ್ಛಾದಿತ ಚಳಿಗಾಲ, ಅದರ ನಡುವೆ ತೀವ್ರ ಅಂತರ್ಮುಖಿಯಾಗಿಬಿಟ್ಟಿರುವ ಇಂಗ್‌ಮಾರ್‍. ಅವನು ಕಳೆಯುವ ಒಂದೊಂದು ಕ್ಷಣವೂ, ಫಟನೆಯೂ ಮನವನ್ನು ಕದಡುತ್ತದೆ, ಹಿಂಡುತ್ತದೆ. ಇದೆಲ್ಲವೂ ತೆಳುಹಾಸ್ಯದ ಹೊದಿಕೆಯಲ್ಲೇ ನಡೆಯುತ್ತದೆ ಎನ್ನುವುದು ಕಥಾಹಂದರದಡಿಯ ನೋವನ್ನು ಮತ್ತಷ್ಟು ತೀವ್ರವಾಗಿಸುತ್ತದೆ.
ಈ ಚಿತ್ರದ ನಿರ್ದೇಶಕ ಚಿತ್ರಿಸುವ ಮಕ್ಕಳ ಜಗತ್ತು ಅದ್ಭುತ ಮತ್ತು ಅದ್ವಿತೀಯ ಎನಿಸಿತು. ಇಂಗ್‌ಮಾರ್‌ ವಯಸ್ಸಿನ ಪಥೇರ್‍ಪಾಂಚಾಲಿ ಯ ಅಪು ನೆನಪಾದ, ಬಿಲ್ಲಿ ಎಲಿಯಟ್ ನ ಬಿಲ್ಲಿ ನೆನಪಾದ.

No comments: