17.11.07

ಬಾಣಲೆ ಬೆಂಕಿ

ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.

ಒಣ ತಾತ್ವಿಕತೆ, ಹಸಿ ಸುಳ್ಳುಗಳ್ಳಿಂದ ತುಂಬಿ ಹೋಗಿರುವ ಕರ್ನಾಟಕದ ರಾಜಕೀಯ ಭಾಷೆಯನ್ನು ಕೇಳಿ ಏನೋ-ಎಲ್ಲೋ-ಯಾರೋ-ಯಾರಿಗೋ ಮಾತಾಡುತ್ತಿದ್ದಾರೆ ಅನಿಸಿತ್ತು. ಇದು ಮಾಧ್ಯಮಗಳ ತುಂಡಾಟ ಇರಬಹುದೆನ್ನುವ ಗುಮಾನಿಯೂ ಇಲ್ಲದಿಲ್ಲ. ಇದೆಲ್ಲವನ್ನು ರಾಜಕೀಯ ಎಂದು ಕರೆಯುವುದು ಕೂಡ ಸರಿಯಲ್ಲ. ರಾಜಕೀಯದ ಘನತೆಯನ್ನು ರಾಜಕಾರಣಿಗಳಿಗೆ ತಿಳಿಸಿಕೊಡುವ ಮಾರ್ಗ ಜನಕ್ಕಿದೆಯೆ ಎಂದು ಯೋಚಿಸುವಂತಾಯಿತು. ಕರ್ನಾಟಕದ ಪ್ರಜಾತಂತ್ರದಲ್ಲಿ ಇನ್ನೂ ಪ್ರಬಲವಾಗಿರುವ ಫ್ಯೂಡಲ್ ವ್ಯವಸ್ಥೆ ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ದೊಡ್ಡ-ದೊಡ್ಡ ಹಾರಗಳು, ದೊಡ್ಡ-ದೊಡ್ಡ ಸಿಂಹಾಸನದಂಥ ಕುರ್ಚಿಗಳು, ದೊಡ್ಡ-ದೊಡ್ಡ ಚೇಲಾಗಳ ಗುಂಪು, ದೊಡ್ಡ-ದೊಡ್ಡ ಮಾನ-ಅವಮಾನದ ಮಾತುಗಳು. ಇವೆಲ್ಲವನ್ನು ಹೇಸಿಗೆಯಿಂದ ನೋಡಿ ಪ್ರಯೋಜನವಿಲ್ಲ. ಇವೆಲ್ಲಾ ಜನತೆಯ ಮನಸ್ಸಿನ ಮೇಲೆ ಪ್ರಭಾವ ಬೀರುವ ಕ್ರಿಯಾಶೀಲ ಕುರುಹುಗಳು. "ಪ್ರಜಾತಂತ್ರ" ಎಂದುಕೊಳ್ಳುವ ನಮ್ಮ ವ್ಯವಸ್ಥೆಯಲ್ಲಿ, ನಮ್ಮ ಜನರ ಸುಪ್ತಪ್ರಜ್ಞೆಗೆ ಸಲ್ಲುವಂಥ ಆಟಗಳು. ಹೊರ ಜಗತ್ತಿನ ತವಕ-ತಲ್ಲಣಗಳನ್ನು, ಆಸೆ-ಭದ್ರತೆಗಳ ಹಾತೊರೆಯುವಿಕೆಯನ್ನು ಒಳಮನಸ್ಸಲ್ಲಿ ಸೂಕ್ಷ್ಮವಾಗಿ ತಣಿಸಲು ಹವಣಿಸುವ ಪ್ರಯತ್ನಗಳು. ಎಷ್ಟೇ ಕುಟಿಲವಾಗಿದ್ದರೂ ಕೂಡ ಅವು ನಿಜ, ವಾಸ್ತವ ಎಂದು ಗೊತ್ತಾಗಲು ಹೆಚ್ಚು ಶ್ರಮಬೇಕಾಗುವುದಿಲ್ಲ.

ಇನ್ನು ಆಸ್ಟ್ರೇಲಿಯಾದ ರಾಜಕೀಯದಲ್ಲಿ ಎಲ್ಲ ತಾತ್ವಿಕತೆಗಳನ್ನು ಮೂಲೆಗೆ ತಳ್ಳಿರುವುದು ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ರಾಶಿ ರಾಶಿ ಸುಳ್ಳು ಹೇಳಿ ಸಿಕ್ಕಿಬಿದ್ದಿರುವ ಈ ಸರ್ಕಾರ ಯಾವ ಮುಖದಿಂದ ಜನರನ್ನು ವೋಟು ಕೇಳೀತು ಎಂದು ಅಚ್ಚರಿಪಡುವುದು ಮುಗ್ಧತೆ ಅನಿಸುತ್ತದೆ. ಈ ಸರ್ಕಾರ ಆಸ್ಟ್ರೇಲಿಯಾದ ಆದಿವಾಸಿಗಳನ್ನು, ಅಂಗವಿಕಲರನ್ನು, ವಯೋವೃದ್ಧರನ್ನು, ಮಕ್ಕಳನ್ನು, ಬಡವರನ್ನು, ನಿರಾಶ್ರಿತರನ್ನು ನಡೆಸಿಕೊಂಡ ರೀತಿ ಎಂಥ ಕಲ್ಲೆದೆಯವರನ್ನೂ ನಾಚಿಸುವಂಥದು. ಅದಾವುದೂ ಈ ಚುನಾವಣಾ ಮಾತುಕತೆಗಳಲ್ಲಿ ಸುಳಿಯುತ್ತಿಲ್ಲ. ಮನೆ ಕೊಳ್ಳಲು ಸಹಾಯವಾಗುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ, ವೇತನ ಹೆಚ್ಚುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ ಎಂಬಂಥ ಒಂದೆರಡು ಕ್ಷುಲ್ಲಕ ವಿಷಯಗಳೇ ಮಹತ್ತರವಾಗಿಬಿಟ್ಟಿದೆ. ನಾಡಿನ ಒಳಗಿಗೆ ಹಿಡಿದಿರುವ ಅನೈತಿಕ ಒರಲೆಯ ಬಗ್ಗೆ ಅನುಕೂಲಕರ ನಿರ್ಲಕ್ಷ್ಯವನ್ನು ಗಮನಿಸಿದರೆ ವಾಕರಿಕೆಯಾಗುತ್ತದೆ. ಇರುವ ಎರಡು ಮುಖ್ಯ ಪಾರ್ಟಿಗಳು ಒಂದೇ ಬಗೆಯ ಮಾತಾಡುತ್ತಿರುವುದು ವಿರೋಧ ಪಕ್ಷದ ನರಹೀನತೆಯನ್ನು ಜಗಜ್ಜಾಹೀರು ಮಾಡಿದೆ.

ರಾಜಕೀಯ ಯಾವಾಗಲೂ ಎಲ್ಲ ಕಡೆಯೂ ಹೀಗೆಯೆ ಎಂಬ ಒಣನಿಲುವು ತಳೆಯಲಾದೀತೆ? ನಾವು ಯಾವಾಗಲೂ ಹೀಗೇ ಎಂಬುದನ್ನು ಹತಾಶರು ಇನ್ನೊಂದು ರೀತಿಯಲ್ಲಿ ಹೇಳಿದಂತಲ್ಲವೆ ಅದು?

ಇರಲಿ, ಎಲ್ಲ ಬಿಟ್ಟು ನನ್ನೆದುರಿಗಿರುವ ಬೇಸಿಗೆಯಲ್ಲಿ ಒಂದಷ್ಟು ಅಲೆದಾಡಬೇಕು. ಈ ಹಿಂದೆ ಹೋಗಿರದ, "ಅಲ್ಲೇನಿದೆ" ಎಂದು ಯಾರೂ ಹೋಗದ ಕಡೆಯೆಲ್ಲಾ ಅಲೆಯಬೇಕು. ಅಲೆದಾಡಿ ಹೊಸ ಜನರನ್ನು ಮಾತಾಡಿಸಬೇಕು ಎಂದು ಹುರಿದುಂಬಿಸಿಕೊಳ್ಳುತ್ತೇನೆ.

2 comments:

Keshav.Kulkarni said...

ಅನಿವಾಸಿ,
ತುಂಬ ಚೆನ್ನಾಗಿ ಬರೆದಿದ್ದೀರಿ.
ಪ್ರಜಾಪ್ರಭುತ್ವದ ಹೆಸರಿನಲ್ಲಿ ಎಲ್ಲ ದೇಶಗಳ ರಾಜಕೀಯ ಪಕ್ಷಗಳು, ಸರಕಾರಗಳು ಮಾಡುವುದು ಒಂದನ್ನೇ: ತಮ್ಮ ತಮ್ಮ ಬೆಳೆ ಬೇಯಿಸಿಕೊಳ್ಳುವುದು.
ಪ್ರಜಾಪ್ರಭುತ್ವವು, ನಮ್ಮ ದೇಶದ ಫ್ಯೂಡಲ ವ್ಯವಸ್ತೆಯಿಂದ, ಇಂಗ್ಲಂಡಿನ ಬಿಗ್ ಬ್ರದರ್ ವ್ಯವಸ್ಥೆಯಿಂದ ಹಾದು, ಅಮೆರಿಕದ ಅಂಕಲ್ ಸ್ಯಾಮ್ ವರೆಗೆ ಹಬ್ಬುತ್ತಲಿರುತ್ತದೆ ಎನ್ನುವ ಸತ್ಯದಲ್ಲೂ, ಜನಸಾಮಾನ್ಯರ ಬದುಕು ಇನ್ನೂ ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಂಡಿರುವುದು ಆಶ್ಚರ್ಯವಲ್ಲವೇ?
-ಕೇಶವ
www.kannada-nudi.blogspot.com

ಅನಿವಾಸಿ said...

ಕೇಶವರೆ,
ಸರಿಯಾಗಿ ಹೇಳಿದಿರಿ...
ಆದರೆ, "ಜನಸಾಮಾನ್ಯ" ರಾಜಕೀಯ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೇನೋ...
ಪ್ರತಿಕ್ರಿಯೆಗೆ ಥ್ಯಾಂಕ್ಸ್...