5.8.07

ಬರ್ಗ್‌ಮನ್‌ನ ‘ವಿಂಟರ್‍ ಲೈಟ್’'

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.

ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.

ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಅರ್ಧ ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಅರ್ಧ ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.

ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.

ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.

ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.

No comments: